ಡೆಸ್ಮೊಸ್ಟೈಲಿಯ
ವಿಚಿತ್ರಬಗೆಯ ಜಲವಾಸಿ ಸ್ತನಿ. ಉತ್ತರ ಪೆಸಿಫಿಕ್ ಇಕ್ಕೆಲಗಳಲ್ಲಿನ ಮಯೋಸಿನ್ ನಿಕ್ಷೇಪದಲ್ಲಿ ಇದರ ಹಲ್ಲುಗಳು ಮತ್ತು ಅಪರೂಪವಾಗಿ ಇದರ ತಲೆಬುರುಡೆ ಕಂಡುಬರುತ್ತವೆ. ಇದನ್ನು ಹೈರಕಾಯ್ಡಿಯ, ಪ್ರೊಬಾಸಿಡಿಯ, ಎಂಬ್ರಿತಾಪೊಡ, ಸೈರೀನಿಯಗಳ ಜೊತೆಗೆ ಸಬ್ ಅಂಗ್ಯುಲೇಟ ಗುಂಪಿಗೆ ಸೇರಿಸಲಾಗಿದೆ. 1934ರಲ್ಲಿ ಡೆಸ್ಮೊಸ್ಟೈಲಿಯದ ಒಂದು ಕಂಕಾಲ ಜಪಾನಿನಲ್ಲಿ ಸಿಕ್ಕಿತು. ಇದರ ಮೈಕಟ್ಟು ಕೊಂಚಮಟ್ಟಿಗೆ ಹಿಪ್ಪೊಪೊಟಮಸ್ ರೀತಿಯದು. ಇದಕ್ಕೆ ಬಲಿಷ್ಠವಾದ ನಾಲ್ಕು ಅವಯವಗಳಿವೆ. ದವಡೆ ಹಲ್ಲುಗಳಲ್ಲಿ, ದೊಡ್ಡದಾದ ಹಿಂದವಡೆ ಹಲ್ಲುಗಳು ಒತ್ತಾಗಿ ಜೋಡಣೆಗೊಂಡಿವೆಯಲ್ಲದೆ ದಪ್ಪ ಎನಾಮೆಲ್ ಲೇಪನವನ್ನೂ ಸ್ತಂಭಾಕೃತಿಯ ಅನೇಕ ಮೊನೆಗಳನ್ನೂ ಬೆಳೆಸಿಕೊಂಡಿರುವುದು ಕಾಣುತ್ತದೆ. ಈ ಬಗೆಯ ರಚನೆಯಿಂದಾಗಿ ಡೆಸ್ಮೊಸ್ಟೈಲಿಯ ಮೃದ್ವಂಗಿಗಳನ್ನು ತಿಂದು ಬದುಕುತ್ತಿತ್ತೆಂದು ತಿಳಿಯಲಾಗಿದೆ. ಪ್ರೊಬಾಸಿಡಿಯಗಳಂತೆ ಇದರಲ್ಲೂ ಬಾಯಿ ಸಮ ಮಟ್ಟದ ಮುಂದಿನ ಚಲನೆಯನ್ನು ಪಡೆದಿತ್ತು. ಇದರಿಂದಾಗಿ ಹಲ್ಲುಗಳು ಸ್ಥಾನಪಲ್ಲಟಗೊಂಡಿವೆ. ಮುಂದವಡೆ ಹಲ್ಲುಗಳು ಹೆಚ್ಚುಕಡಿಮೆ ಕೋರೆಹಲ್ಲಿನಂತಿವೆ. ಇವುಗಳಲ್ಲಿ ಮೇಲಿನ ಜೊತೆ ಕೋರೆಹಲ್ಲುಗಳಿಂದ ಕೂಡಿದೆಯಾದರೆ ಕೆಳಗಿನ ಎರಡು ಜೊತೆಗಳು ಬಾಚಿ ಮತ್ತು ಕೋರೆಹಲ್ಲುಗಳಿಂದ ಕೂಡಿವೆ. ಜೂಗಲ್ ಮೂಳೆಗಳು ಚಿಕ್ಕವು. ನಾಸಿಕದ ಮೂಳೆಗಳು (ನೇಸಲ್ಸ್) ಚೆನ್ನಾಗಿ ಬೆಳೆದಿದ್ದರೂ ಮುಂಭಾಗದಲ್ಲಿ ಇರುವಂಥ ಹೊರ ಹೊಳ್ಳೆಗಳ ಅಂಚನ್ನು ಇವು ಪ್ರವೇಶಿಸಿಲ್ಲ.
(ಎ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ